ಆದರೆ, ತನ್ನ ಭಾವನೆಗಳನ್ನು ಮತ್ತು ಅನ್ನಿಸಿಕೆಗಳನ್ನು ಹಂಚಿಕೊಳ್ಳಲು ಉಪಯೋಗಿಸಲು ಭಾಷೆಯನ್ನು ಕಲಿತ ಮನುಷ್ಯ ಅದಕ್ಕಿಂತಲೂ ಮೊದಲು ತನ್ನ ಭಾವನೆಗಳನ್ನು ಮತ್ತು ಅನ್ನಿಸಿಕೆಗಳನ್ನು ಹಂಚಿಕೊಳ್ಳಲು ಬಳಸುತ್ತಿದ್ದ ಮಾಧ್ಯಮವಾದ ಶಬ್ಧ ಅಥವಾ ನಾದವನ್ನು ಕೈಬಿಡಲಿಲ್ಲ. ಆಡುವ ಮಾತಿನಲ್ಲಿ ಅಥವಾ ಮಾತಿನ ದಾಟಿಯಲ್ಲಿ ಏರಿಳಿತಗಳನ್ನು ಅಳವಡಿಸಿಕೊಂಡು ಒಂದೊAದೂ ಶಬ್ಧವು ಅಥವಾ ಪದವು ಅಥವಾ ವಾಕ್ಯವು ಕೇವಲ ಮಾತಾಗಿರದೆ, ಅಥವಾ ಶಬ್ಧಗಳ ಅಥವಾ ಪದಗಳ ಸಾಲಾಗಿರದೆ ಆ ಮಾತಿನಲ್ಲೂ ತನ್ನ ಅನ್ನಿಸಿಕೆಯು ಪ್ರತಿಫಲಿಸುವಂತೆ ಆಡುವುದನ್ನೂ ಕಲಿತ. ಆ ಹಂತದಲ್ಲಿಯೇ ಭಾಷೆಯ ಜೊತೆ ನಾದವೂ ಕೂಡಿ ಮಾತಿಗೆ ಹೆಚ್ಚಿನ ಅರ್ಥವನ್ನು ಕೊಡಲಾರಂಭಿಸಿರಬೇಕು.
ನಂತರ ಮನುಷ್ಯನು ತಾನು ಹೇಳಬೇಕಾದ ಮಾತನ್ನು ಅರ್ಥವತ್ತಾದ ಹನಿಯಾಗಿ, ದೊಡ್ಡ ವಿಷಯವನ್ನು ಒಳಗಿರಿಸಿಕೊಂಡ ಪುಟ್ಟ ಗುಳಿಗೆಯಾಗಿ, ಬೆಳಕಿನ ಸಣ್ಣ ಕಿಡಿಯಾಗಿ ಹೇಳುವ ಕಲೆಯನ್ನು ಪದ್ಯರಚನೆಯಲ್ಲಿ ಕಂಡುಕೊAಡ. ಆ ಪದ್ಯವು ಲಯದಲ್ಲಿ ಮೂರ್ತಿವೆತ್ತು ನೆನಪಿಟ್ಟುಕೊಳ್ಳಲು ಸುಲಭವಾಗುವಂತೆ ಇರುವುದು ವಿಶೇಷ. ಎರಡನೆಯದಾಗಿ ಲಯದ ಚೌಕಟ್ಟಿನಲ್ಲಿ ನಡೆಯುತ್ತಿರುವ ಕಾರಣ ನಾದದ ಧಾರೆಯಲ್ಲಿ ಸೇರಿಸಿ ಹಾಡಲು ಬರುವುದು ಮತ್ತೊಂದು ವಿಶೇಷ. ಹೀಗೆ ಮಾತಾಗಿ ಬಂದದ್ದು ಪದ್ಯರೂಪದಲ್ಲೂ ಕಾಣಿಸಿಕೊಂಡಿತು ಅನ್ನುವುದು ಒಪ್ಪಬೇಕಾದದ್ದೇ. ಪದ್ಯರೂಪ ಪಡೆದುಕೊಂಡ ಸಾಹಿತ್ಯ ಪದ್ಯಕಾವ್ಯಗಳಿಗೆ ಕಾರಣವಾಯ್ತು.
ಕವಿರಾಜಮಾರ್ಗಕ್ಕೂ ಮೊದಲೇ ಈ ರೀತಿಯ ಪದ್ಯಪ್ರಾಕಾರಗಳು ಹಾಡಲ್ಪಡುತ್ತಿದ್ದವು. ರಾಜ ಮಹಾರಾಜರು ತಮ್ಮ ಶಾಸನಗಳನ್ನು ಕಲ್ಲಿನ ಫಲಕಗಳ ಮೇಲೆ, ಓಲೆಗರಿಗಳ ಮೇಲೆ ಮತ್ತು ಲೋಹದ ಹಾಳೆಗಳ ಮೇಲೆ ಕೆತ್ತಿಸಲು ಪ್ರಾರಂಭಿಸಿದಾಗ ಪದ್ಯಪ್ರಾಕಾರಕ್ಕೆ ಬಿಡಿಪದ್ಯಗಳಾಗಿ ನಿಲ್ಲುವ ಭಾಗ್ಯ ಕೂಡಿಬಂದಿರಬೇಕು. ಅಲ್ಲಿ ಮೊದಲು ಕಾಣಿಸಿಕೊಂಡದ್ದು ತ್ರಿಪದಿ ಅನ್ನಿಸುತ್ತದೆ. ಅಲ್ಲಲ್ಲಿ ರಗಳೆಗಳೂ ರೂಢಿಯಲ್ಲಿದ್ದವು.
ಜಾನಪದ ಸಾಹಿತಿಗಳು, ವಚನಕಾರರು ಮತ್ತು ಹರಿದಾಸ ಸಾಹಿತ್ಯ ರಚನಕಾರರು ಹಾಗೂ ವಾಗ್ಗೇಯಕಾರರು ಸಮಾಜಕ್ಕೆ ಹೇಳಬೇಕಾದ ದೊಡ್ಡದೊಡ್ಡ ವಿಷಯಗಳನ್ನು ಹತ್ತಾರು ಸಾಲುಗಳ ವಚನಗಳಲ್ಲಿ ಅಥವಾ ಹಾಡುಗಳಲ್ಲಿ ಕೂಡಿಸಿ ಹಾಡುವ ಮೂಲಕ ಛಂದಸ್ಸಿನಲ್ಲಿದ್ದು ಗೇಯಗುಣ ಹೊಂದಿದ್ದ ಪುಟ್ಟಪುಟ್ಟ ಪದ್ಯಗಳು ಹೇರಳವಾಗಿ ರಚಿಸಲ್ಪಡಲು ಕಾರಣರಾದರು. ನವೋದಯ ಸಾಹಿತ್ಯದ ಕಾಲಕ್ಕೆ ಈ ಪುಟ್ಟ ಪದ್ಯಗಳಿಗೆ ಹೊಸಹೊಸ ರೂಪ ಬರತೊಡಗಿತು. ಕ್ರಮೇಣ ಅಂತಹವೇ ಪದ್ಯಗಳು ಕವನಗಳಾಗಿ ಪ್ರಚಲಿತವಾದವು ಅನ್ನಬಹುದೇನೋ. ಆನಂತರ ಆ ಕವನಗಳು ಸಂಗೀತದ ಲೇಪನ ಹೊಂದಿ ಗೀತೆಗಳಾದವು. ಮತ್ತು ಅವುಗಳನ್ನು ಭಾವಗೀತೆ ಎಂದು ಕರೆಯುವುದು ರೂಢಿಗೆ ಬಂತು.
ಭಾವಗೀತೆಯು ಸುಗಮಸಂಗೀತ ಪ್ರಾಕಾರದ ಒಂದು ಅಂಗ. ಅದಕ್ಕೆ ಸುಂದರವಾದ ಮತ್ತು ಅರ್ಥಪೂರ್ಣವಾದ ಕವನವೇ ನೆಲ ಅಥವಾ ನೆಲೆ ಎಂದರೆ ತಪ್ಪಾಗಲಾರದು. ಭಾವಗೀತೆಯಾಗಲು ಒಂದು ಕವನಕ್ಕೆ ಇರಬೇಕಾದ ಮೊಟ್ಟಮೊದಲ ಗುಣವೆಂದರೆ ಲಯ. ಸರಳವಾದ ಶಬ್ಧಗಳನ್ನು ಅರ್ಥಪೂರ್ಣ ಪದಗಳ ರೂಪದಲ್ಲಿ ಅಚ್ಚುಕಟ್ಟಾದ ಲಯಬಂಧದಲ್ಲಿ ಜೋಡಿಸಿ ಒಂದು ನಿರ್ಧಿಷ್ಟ ಚೌಕಟ್ಟಿನಲ್ಲಿ ಹೆಣೆದಾಗ ಅದು ಗೇಯಗುಣವುಳ್ಳ ಕವನವಾಗುತ್ತದೆ. ಅಂತಹ ಕವನವನ್ನು ಸ್ವರಸಂಯೋಜನೆ ಮಾಡಬಯಸುವವರು ಅಥವಾ ಹಾಡಬಯಸು ವವರು ಅದರಲ್ಲಿ ನಿರೀಕ್ಷಿಸುವ ಗುಣಗಳೆಂದರೆ ಸಂಕೀರ್ಣವಲ್ಲದ ಸರಳವಾದ ಮತ್ತು ಸುಗಮವಾದ ಸಂಚಾರವುಳ್ಳ ಲಯ ಅಥವಾ ನಡೆ. ಅದನ್ನೇ ಸರಳ ಛಂದಸ್ಸು ಅನ್ನುತ್ತೇವೆ. ಎರಡನೆಯದಾಗಿ, ಅಲ್ಲಿನ ಪದಗಳು ಕೋಮಲವಾಗಿ, ಮೃದುವಾಗಿರಬೇಕು. ಕವನದ ಸಾಲುಗಳು ಲಯದ ದಾರದಲ್ಲಿ ಹೆಣೆದ ಸುಂದರ ಹೂಗಳ ಮಾಲೆಯಂತಿರಬೇಕು, ಅಥವಾ ಲಯದ ಧಾರೆಯಲ್ಲಿ ಹರಿಯುವ ತಿಳಿನೀರ ಹೊಳೆಯಂತಿರಬೇಕು.
ಭಾವಗೀತೆಗೆ ಒಗ್ಗುವ ಕವನದಲ್ಲಿ ನಾವು ನಿರೀಕ್ಷಿಸುವುದು ಅತಿ ಕ್ಲಿಷ್ಟವಾಗಿ ಕಾಣದ, ಅತಿಸಾಂದ್ರವಾಗಿ ಕಾಣದ, ಅತಿ ಗಾತ್ರವಾಗಿ ಕಾಣದ, ಅತಿ ಭಾರವಾಗಿ ಕಾಣದ ಮತ್ತು ಅತಿ ಹಗುರವೂ ಅನ್ನಿಸದ ಕೋಮಲ ಪದಗಳನ್ನು.
ಪ್ರತಿಯೊಂದು ಕವನವೂ ಒಂದು ಕವಿದನಿಯನ್ನು ಹೊಂದಿರುತ್ತದೆ. ಮೊದಲು ಅದರಲ್ಲಿ ಬರಹಪೂರ್ವ ಕವಿದನಿ ಇರುತ್ತದೆ. ಅದರಲ್ಲಿ ಎರಡು ವಿಧ. ಮೊದಲನೆಯದಾಗಿ ಒಂದು ವಿಷಯವನ್ನು ಇಟ್ಟುಕೊಂಡು ಅದರ ಮೇಲೆ ಪದಗಳನ್ನು ಜೋಡಿಸಲು ಕೂರುವುದು. ಎರಡನೆಯದು, ಕುಳಿತಿರುವಾಗಲೋ, ಮಲಗಿರುವಾಗಲೋ, ಕೆಲಸ ಮಾಡುತ್ತಿರು ವಾಗಲೋ, ಸ್ನಾನಕ್ಕೋ, ಧ್ಯಾನಕ್ಕೋ ಪೂಜೆಗೋ ಕೂತಾಗ ಒಂದು ರಮ್ಯವಾದ ಸಾಲು ಹೊಳೆಯುತ್ತದೆ. ಅವೆರಡೂ ಬರಹಪೂರ್ವ ಕವಿದನಿಗಳು. ಒಂದರ್ಥದಲ್ಲಿ ಬರೆಯಲು ಬಯಸಿದವನ ಕನಸುಗಳಾಗಿರುತ್ತವೆ.
ಅಂತಹುದನ್ನು ಮನಸ್ಸಿನಲ್ಲಿ ಗುನುಗಿಕೊಂಡವರು ಆನಂತರ ಅದನ್ನು ಅಕ್ಷರಗೊಳಿಸುತ್ತಾರೆ. ಆ ಸಾಲು ಆ ಪದ್ಯದ ಅಥವಾ ಕವನದ ಪಲ್ಲವಿಯ ಒಂದು ಸಾಲಾಗಬಹುದು, ಇಲ್ಲವೇ ಚರಣದ ಸಾಲಾಗಬಹುದು. ಆದರೆ, ಅಂತಹುದೊAದು ಕವನವು ಮೂಡಿ ಬಂದಾಗ ಬರಹಪೂರ್ವ ಕವಿದನಿಯು ಅಥವಾ ಕವಿಯ ಕನಸು ಹಾಗೇ ಉಳಿದಿರುವ ಸಾಧ್ಯತೆಗಳು ತುಂಬಾ ಕಡಿಮೆ. ಯಾವುದೇ ಕವನವಾಗಲೀ, ಕಥೆಯಾಗಲೀ, ಕಾದಂಬರಿಯಾಗಲೀ, ನಾಟಕವಾಗಲೀ, ಬರಹವಾಗಲೀ ಅದು ತನ್ನ ಪೂರ್ಣ ಸ್ವರೂಪವನ್ನು ಪಡೆದು ನಿಂತಾಗ ಅದರ ಕರ್ತೃ ಏನಂದುಕೊAಡಿದ್ದನೋ ಅದಕ್ಕಿಂತಲೂ ಭಿನ್ನವಾಗಿ ಮೂಡಿಬರುವುದೇ ಹೆಚ್ಚು.
ಕವನವು ಸಿದ್ಧವಾದ ಮೇಲೆ ಅದನ್ನು ಬರೆದವನಿಗೆ ಅವನ ಆಶಯಗಳ ಅನುಸಾರ, ಅವನ ಅರಿವಿನ ಮತ್ತು ಆಲೋಚನೆಯ ಮಟ್ಟದ ಅನುಸಾರ ಒಂದು ರೂಪವನ್ನು ಕೊಡುತ್ತದೆ. ಸಾಮಾನ್ಯವಾಗಿ ಪ್ರಜ್ಞಾವಂತ ಕವಿಗೆ ತಾನು ಬರೆದಿರುವ ಕವನದ ಗುಣಮಟ್ಟದ ಅರಿವಾಗೇ ಆಗುತ್ತದೆ. ಅದರ ಆಶಯವು ತಾನಂದುಕೊAಡಿದ್ದAತೆ ಅಥವಾ ಅಂದುಕೊAಡಿದ್ದುದ ಕ್ಕಿಂತ ಚೆನ್ನಾಗಿ ಮೂಡಿ ಬಂದಿದ್ದರೆ ಕವಿ ತುಂಬಾ ಸಂತೋಷ ಪಡುತ್ತಾನೆ. ತನ್ನ ಆಶಯವು ಭಿನ್ನವಾಗಿ ಮೂಡಿ ಬಂದಿದ್ದು ಆಗಲೂ ಚೆಲುವಾಗಿದೆ ಕಂಡರೆ, ಆಗಲೂ ಸಂತಸ ಪಡುತ್ತಾನೆ. ಆದರೆ, ತಮ್ಮ ಸಾಮರ್ಥ್ಯದ ಅರಿವಿಲ್ಲದವರು, ತಮ್ಮ ಕೌಶಲ್ಯದ ಮಟ್ಟವನ್ನರಿಯದವರು ಮಾತ್ರ ತಾವು ಬರೆದದ್ದು ಬಾಲಿಷವಾಗಿದ್ದರೂ ಕೂಡಾ ಅತಿ ಉತ್ಕೃಷ್ಟ ಕೃತಿ ಎಂದು ಭಾವಿಸಿ ಬೀಗುತ್ತಾರೆ.
ಪದ್ಯವು ಸಲ್ಲಕ್ಷಣವಾಗಿದ್ದರೆ ಕವನವೆನಿಸಿಕೊಳ್ಳುತ್ತದೆ. ಹಾಗೆ ಕವನವಾದುದನ್ನು ಓದಿದವರಿಗೆ ಏನನ್ನಿಸುತ್ತದೋ ಅದು ಓದಿದವರÀ ದೃಷ್ಟಿಯ ಕವಿದನಿಯಾಗುತ್ತದೆ. ಪದಗಳ ಜೋಡಣೆ ಮತ್ತು ಒಂದೊAದೂ ಪದದ ಜೀವಾರ್ಥವನ್ನು ಅರಿತು ಅನುಸರಿಸಿ ಹಾಡಿದವರಿಗೆ ಆಗುವ ಅನುಭವವು ಹಾಡುಗರ ಪಾಲಿನ ಕವಿದನಿಯಾಗುತ್ತದೆ. ಕೊನೆಗೆ ಕವನವನ್ನು ಓದಿದವರಿಗೆ ಮತ್ತು ಕೇಳಿದವರಿಗೆ ಆ ಕವನವನ್ನು ಬರೆದವರಿಗೆ ಆದಂತಹ ಅಥವಾ ಹಾಡಿದವರಿಗೆ ಆದಂತಹ ಕವಿದನಿಯ ದರ್ಶನವೇ ಆಗಬಹುದು, ಇಲ್ಲವೇ, ಅವರವರ ಆನುಭವಿಕೆಯ ಮೇರೆಗೆ ಹೊಸದೊಂದು ಕವಿದನಿಯ ದರ್ಶನವೂ ಉಂಟಾಗಬಹುದು. ಮತ್ತೊಂದು ವಿಶೇಷವೆಂದರೆ, ಓದುಗನಲ್ಲಿನ ಮತ್ತು ಕೇಳುಗನಲ್ಲಿನ ಕವಿದನಿಯು ಒಂದೊAದು ಸಾರಿ ಓದಿದಾಗಲೂ, ಒಂದೊAದು ಸಾರಿ ಕೇಳಿದಾಗಲೂ ಬದಲಾಗುತ್ತಾ ಹೋಗಬಹುದು. ಹೀಗೆ ಒಂದು ಕವನವು ಒಂದೊAದು ಹಂತದಲ್ಲಿ ಕೊಡುವ ಬೇರೆಬೇರೆ ಅನುಭವವನ್ನು ಆನಂದವನ್ನು ಕವಿದನಿ ಎಂದು ನಾನು ತಿಳಿದುಕೊಂಡಿದ್ದೇನೆ. ಈ ವಿಷಯದಲ್ಲಿ ಬೇರೆಯವರಿಗೆ ಬೇರೆಯದೇ ಭಾವನೆ ಇದ್ದರೂ ಇರಬಹುದು.
ಗೇಯಗುಣದ ಅರ್ಥವತ್ತಾದ ಕವನ, ಅದರ ಸ್ವರಸಂಯೋಜನೆ, ಕವನದ ಸಾಲುಗಳಲ್ಲಿನ ಅರ್ಥಕ್ಕೆ ಜೀವ ತುಂಬಿ ಅದನ್ನು ಅನುಭವಿಸಿ ಹಾಡುವುದು ಮತ್ತು ಕವನದಲ್ಲಿನ ಮೂಲ ಆಶಯ ಹಾಗೂ ಅದು ಸಂಗೀತದೊAದಿಗೆ ಸಮ್ಮಿಳಿತವಾಗಿ ಕಲಾವಿದನ ಕೊರಲಲ್ಲಿ ಹಾಡಾಗಿ ಮೂಡಿ ಬಂದುದನ್ನು ಕೇಳಿ ಅನುಭವಿಸುವುದು – ಇಷ್ಟೂ ಪ್ರಕ್ರಿಯೆಗಳು ಶಾಂತವಾಗಿ ನಡೆದಾಗ ಒಂದು ಕವನವು ಶುದ್ಧ ಭಾವಗೀತೆಯ ಸಾರ್ಥಕತೆಯನ್ನು ಪಡೆಯುತ್ತದೆ.
ಭಾವಗೀತೆಯ ಬಗ್ಗೆ ಇಲ್ಲಿ ಬರೆದಿರುವುದು ತುಸು ಹೆಚ್ಚಾಯಿತೇನೋ ಅನ್ನಿಸುತ್ತಿದೆ. ಆದರೂ, ಭಾವಗೀತೆಯ ಪ್ರಾಕಾರವು ಪ್ರಾರಂಭಿಕ ದಿನಗಳಲ್ಲಿ ಪ್ರಕಾಶಿಸಿದ ವೇಗದಲ್ಲಿ ಕೆಲದಿನಗಳ ನಂತರ ಪ್ರವಹಿಸದೆ ಸೊರಗಿದುದನ್ನು ಮತ್ತು ಭಾವಗೀತೆಯ ಸ್ವರೂಪದ ಬಗ್ಗೆ ವ್ಯಾಪಕ ಚರ್ಚೆಗಳು ಮತ್ತು ತಿಳಿದುಕೊಳ್ಳುವ ಆಸ್ತೆ ಮತ್ತು ಆಸಕ್ತಿಯೂ ಜಾಸ್ತಿಯಾಗುತ್ತಿರುವುದನ್ನೂ ಗಮನಿಸಿದಾಗ ಆಸಕ್ತರೆಲ್ಲರೂ ತಮ್ಮತಮ್ಮ ಅನ್ನಿಸಿಕೆಗಳನ್ನು ಬರಹಗೊಳಿಸಿ ಪರಸ್ಪರ ಹಂಚಿಕೊಳ್ಳುವುದು ಸಮಂಜಸವೆAದು ಕಂಡುಬAದ ಪ್ರಯುಕ್ತ ಇಷ್ಟು ಬರೆದುದು ಸರಿಯೆನಿಸಿದೆ ನನಗೆ.
ಪ್ರಸ್ತುತ ಓದುಗರ, ಸುಗಮಸಂಗೀತಜ್ಞರ, ಹಾಡುವವರ ಮತ್ತು ಪೂರಕ ವಾದ್ಯವಾದನ ಕಲಾವಿದರ ಮತ್ತು ಕೇಳುಗರ ಮಡಿಲಿಗೆ ಪ್ರೀತಿಯಿಂದ ಇರಿಸುತ್ತಿರುವ ಈ “ನಲ್ಲೆ ನೀನಿಲ್ಲದೆ” ಕೃತಿಯು ಭಾವಗೀತೆಗಳ ಒಂದು ಹೆದ್ದೆನೆಯಾಗಿದೆ. ಇದರಲ್ಲಿನ ಕವನಗಳಲ್ಲಿ ಪ್ರೀತಿ ಇದೆ, ಪ್ರೇಮವಿದೆ, ಮಮತೆಯ ಭಾವವಿದೆ, ಅಗಲಿಕೆಯ ಎಳೆಗಳಿವೆ, ನಲಿವಿದೆ, ನೋವಿದೆ, ಬಯಕೆಯ ಚಿತ್ರಗಳಿವೆ, ಅಗಲಿಕೆಯ ಅನುಭವವಿದೆ, ವಿರಹವಿದೆ, ಪ್ರಕೃತಿಯ ಚಿತ್ರಣಗಳಿವೆ, ಮಾನವೀಯ ಮೌಲ್ಯಗಳ ಛಾಯೆ ಇದೆ, ತ್ಯಾಗದ ಎಳೆಗಳಿವೆ, ದೇಶಪ್ರೇಮದ ಮಾತುಗಳಿವೆ, ದೇವರೆಂಬ ಕಲ್ಪನೆಯ ಸುತ್ತ ಹೆಣೆದ ಸಾಲುಗಳಿವೆ. ಇನ್ನೂ ಯಾವುದ್ಯಾವುದೋ ಭಾವಗಳ ವಿಶಾಲವಾದ ಪ್ರಪಂಚವಿದೆ.
ಈ ಸಂದರ್ಭದಲ್ಲಿ ಸುಗಮಸಂಗೀತ ಲೋಕದೊಳಗಿನ ನನ್ನ ಯಾನದ ಕೆಲವು ಹೆಜ್ಜೆಗಳನ್ನೂ ನೆನಪಿಸಿಕೊಳ್ಳಬೇಕೆನಿಸುತ್ತದೆ. ಛಂದಸ್ಸಿನ ಹೆಸರೂ ಕೇಳಿರದ ವಯಸ್ಸಿನಲ್ಲಿ, ಲಯ ಎಂಬುದು ಒಂದಿದೆ ಎಂದೂ ಗೊತ್ತಿರದ ಕಾಲದಲ್ಲಿ ಯಾವುದೋ ಹಾಡಿಗೆ ಬೇರೇನೋ ಪದಗಳನ್ನು ಜೋಡಿಸಿ ಹಾಡೊಂದನ್ನು ರೂಪಿಸುವ ಅಭ್ಯಾಸ ನನಗಿತ್ತು. ಹಾಗೆ ಬೆಳೆದು ಬಂದ ಅಭ್ಯಾಸವು ನನ್ನನ್ನು ಆಗೊಮ್ಮೆ ಈಗೊಮ್ಮೆ ಒಂದೊAದು ಪದ್ಯವನ್ನು ಬರೆಯುವ ಗೀಳಿಗೆ ಇಳಿಸಿತ್ತು. ಸಾವಿರದ ಒಂಬೈನೂರ ಎಪ್ಪತ್ತೊಂಬತ್ತನೇ ಇಸವಿಯಲ್ಲಿ ಯಾರದೋ ನೆರವಿನೊಂದಿಗೆ ನನ್ನ ಮೊದಲ ಕವನಸಂಕಲನ ಪ್ರಕಟವಾಯಿತು. ಆನಂತರ ಒಂದೆರಡು ಅಂತಹ ಪ್ರಯತ್ನಗಳನ್ನು ನಡೆಸಿದೆ.
ಸಾವಿರದ ಒಂಬೈನೂರ ಎಂಬತ್ತೇಳರ ಸುಮಾರಿನಲ್ಲಿ ಆಕಸ್ಮಿಕವಾಗಿ ನನಗೆ ಶ್ರೀ ಬಿ ಕೆ ಚಂದ್ರಶೇಖರ್ ಅವರ ಪರಿಚಯವಾಯ್ತು. ನನ್ನ ಮೊದಲ ಪ್ರಕಟಿತ ಕವನ ಸಂಕಲನ “ಭ್ರಮೆ” ಯನ್ನು ಅವರಿಗೆ ಕೊಟ್ಟೆ. ಅದನ್ನು ನೋಡಿದ ಅವರಿಗೆ ಮೊದಲ ಓದಿನಲ್ಲೇ ಅದರಲ್ಲಿನ ಮೂರು ಕವನಗಳು ಇಷ್ಟವಾದದ್ದು ಒಂದು ವಿಶೇಷ. ಪರಿಚಯದ ಕೆಲವೇ ದಿನಗಳಲ್ಲಿ ಆ ಮೂರೂ ಕವನಗಳನ್ನು ತಾವು ಹೊರತರಲು ಯೋಜಿಸಿದ್ದ ಭಾವಗೀತೆಗಳ ಧ್ವನಿಸುರಳಿಯಲ್ಲಿ ಅಳವಡಿಸಿಕೊಳ್ಳುವುದಾಗಿ ಅವರು ಹೇಳಿದಾಗ ನನಗೊಂದು ದೊಡ್ಡ ಆಶ್ಚರ್ಯವೇ ಕಾದಿತ್ತು. ಆಡಿದ ಹಾಗೆ ಅವರು ಆ ಮೂರು ಕವನಗಳನ್ನು ತಮ್ಮ ಹೊಸ ಆಲ್ಬಂ “ಸೊಗಸು” ಗಾಗಿ ಧ್ವನಿಮುದ್ರಿಸಿಯೇಬಿಟ್ಟರು.
ಅದರ ಹಿಂದೆಯೇ ನನಗೆ ಮತ್ತೊಂದು ವಿಶೇಷ ಕಾದಿತ್ತು. ಅದೆಂದರೆ, ನನ್ನ ಮೊಟ್ಟಮೊದಲ ಧ್ವನಿಮುದ್ರಿತವಾದ ಭಾವಗೀತೆಯನ್ನು ಹಾಡಿದವರು ಭಾವಗೀತೆಯ ಕ್ಷೇತ್ರದ ದಿಗ್ಗಜರುಗಳಾಗಿದ್ದ ದಿವಂಗತ ಸಿ ಅಶ್ವಥ್ ಅವರು ಮತ್ತು ಶ್ರೀಮತಿ ರತ್ನಮಾಲಾ ಪ್ರಕಾಶ್ ಅವರು. ಅದೇ ಆಲ್ಬಮ್ಮಿನಲ್ಲಿನ ಇನ್ನೆರಡು ಗೀತೆಗಳನ್ನು ಶ್ರೀಯುತ ಪುತ್ತೂರು ನರಸಿಂಹನಾಯಕ್ ಅವರು ಹಾಡಿದುದೂ ನಾನು ಸದಾ ನೆನೆಸಿಕೊಳ್ಳಬೇಕಾದ ಹೆಮ್ಮೆಯ ವಿಷಯವೇ ಆಗಿದೆ. ಇಂದು ಭಾವಗೀತೆಗಳ ಪ್ರಪಂಚದಲ್ಲಿ ಹೆಸರಾಗಿರುವ ಶ್ರೀ ಶಂಕರ್ ಶಾನಭೋಗ್ ಅವರು ಹಾಡಿದ ಮೊಟ್ಟಮೊದಲ ಭಾವಗೀತೆಯ ಕವನವು ನನ್ನದೇ ಅನ್ನುವುದೂ ನನಗೆ ಹೆಮ್ಮೆಯ ವಿಷಯವೇ. ಆ ಕಾರಣ ಈ ಪುಸ್ತಕವನ್ನು ಭಾವಗೀತೆಯ ಪ್ರಪಂಚಕ್ಕೆ ಪರಿಚಯಿಸುತ್ತಿರುವ ಈ ಸುಸಂದರ್ಭದಲ್ಲಿ ಈ ನಾಲ್ವರನ್ನು ಮನತುಂಬಿ ನೆನೆಯುತ್ತೇನೆ.
ಶ್ರೀಯುತ ಬಿ ಕೆ ಚಂದ್ರಶೇಖರ್ ಅವರಂತೂ ಮೊದಲ ಪರಿಚಯದ ದಿನದಿಂದಲೂ ಮನಸಾ ನನ್ನ ಜೊತೆಯಲ್ಲಿ ಇದ್ದೇಇದ್ದಾರೆ. ಭಾವಗೀತೆಯ ಲೋಕದ ನನ್ನ ಪಯಣದಲ್ಲಿ ಹೆಚ್ಚಿನ ಒಡನಾಟ ಅವರೊಂದಿಗೇ ನಡೆದಿದೆ ಎಂದು ಸಂತೋಷದಿAದ ಹೇಳಿಕೊಳ್ಳಬಲ್ಲೆ. “ಹೂಮಳೆ” ಕೃತಿಯ ಬಹುಶಃ ಎಲ್ಲ ಕವನಗಳನ್ನೂ ಅವರು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವೊಮ್ಮೆ ತಪ್ಪುಒಪ್ಪುಗಳ ಬಗ್ಗೆ ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ. ಈ ಪುಸ್ತಕವು ಪ್ರಕಟಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಮತ್ತೊಮ್ಮೆ ಅವರಿಗೆ ನನ್ನ ಪ್ರೀತಿಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ.
ಇತ್ತೀಚಿನ ಕೆಲವು ತಿಂಗಳುಗಳಿAದ ನಾನು ಹೆಚ್ಚಿನಮಟ್ಟಿಗೆ ನನ್ನ ಹೊಸ ಕವನಗಳನ್ನು ಮತ್ತು ಆಗೊಮ್ಮೆ ಈಗೊಮ್ಮೆ ಹಿಂದೆ ಬರೆದಿದ್ದ ಕವನಗಳನ್ನು ಫೇಸ್ ಬುಕ್‌ನಲ್ಲಿ ಹಾಕತೊಡಗಿದೆ. ಅವುಗಳನ್ನು ಓದಿ ಬಹಳಷ್ಟು ಜನ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಕೆಲವು ಸಂಗೀತಗಾರರು/ಹಾಡುಗಾರರAತೂ ಅವರಿಗೆ ಇಷ್ಟವಾದ ಕವನಗಳನ್ನು ಹಾಡಿ ಸೌಂಡ್ ರೆಕಾರ್ಡರ್‌ನಲ್ಲಿ ಧ್ವನಿಮುದ್ರಿಸಿ ನನಗೆ ಕಳುಹಿಸಿ ಕೊಟ್ಟರು. ಅವರೆಲ್ಲರ ಅಭಿಮಾನಕ್ಕೆ ನಾನು ಋಣಿ.
ಹಾಗೆಯೇ, ಕವಿಯು ತನ್ನಷ್ಟಕ್ಕೆÀ ತಾನೇ ಉದ್ಭವಿಸಿ ಬರುವುದಿಲ್ಲ. ಅವನು ತನ್ನೊಳಗಿನ ಪ್ರತಿಭೆಯ ಅಂತಃಸತ್ವವನ್ನು ಸಂಸ್ಕರಿಸಿಕೊಳ್ಳುತ್ತ ಸುತ್ತಮುತ್ತಲ ಪ್ರಪಂಚದಿAದ ಜ್ಞಾನ ಮತ್ತು ಅನುಭವಗಳ ಕಿರಣಗಳನ್ನು ಸಂಗ್ರಹಿಸಿಕೊಳ್ಳುತ್ತ ಬೆಳೆಯುತ್ತಾನೆ. ಹಾಗೆ ಬೆಳೆಯುವಾಗ ಆತನೊಡನೆ ಸಾಗುವವರು ಇಬ್ಬರು. ಒಬ್ಬರು ಪ್ರೇರಕಶಕ್ತಿಯಾದರೆ ಇನ್ನೊಬ್ಬರು ಪೂರಕ ಶಕ್ತಿಯಾಗಿರುತ್ತಾರೆ. ಪ್ರೇರಕರು ಕವಿಗೆ ವಿಷಯಗಳನ್ನು, ಅಪೇಕ್ಷಿತ ಭಾವಗಳನ್ನು ಕೊಟ್ಟು ಇಂತಹುದೇ ಬೇಕು, ಹೀಗೇ ಬೇಕು ಎಂದು ಪ್ರೇರೇಪಿಸಿ ಅವನಿಂದ ಉತ್ಕೃಷ್ಟವಾದ ಕವನದ ಬೆಳೆಯನ್ನು ತೆಗೆಸುತ್ತಾರೆ. ಪೂರಕರು ಬಹುಶಃ ತಮ್ಮ ಕಾರ್ಯಭಾರದ ಪ್ರಯುಕ್ತವೋ ಏನೋ ತಮಗೆ ಇಂತಹುದೊAದು ಕವನ ಬೇಕು ಎಂದಷ್ಟೇ ಹೇಳಿ ಸಂಪೂರ್ಣ ಸ್ವಾತಂತ್ರö್ಯವನ್ನು ಕೊಟ್ಟು ತಮ್ಮ ಭಾಗದ ಅಥವಾ ವಿಭಾಗದ ಕೆಲಸಗಳಲ್ಲಿ ಮಗ್ನರಾಗಿಬಿಡುತ್ತಾರೆ. ಕವಿಯ ಬದ್ಧತೆ ಅಥವಾ ಜವಾಬ್ದಾರಿಯಿಂದಾಗಿ ಎರಡೂ ಪ್ರಕರಣಗಳಲ್ಲಿ ಅತ್ಯುತ್ಕುçಷ್ಟವಾದ ಕೃತಿಯೇ ಜೀವತಳೆಯುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ, ಕೆಲವರು ಪ್ರೇರಕನ ಕೆಲಸ ಮಾಡಿದರೆ ಶ್ರೀಯುತರುಗಳಾದ ಮೋಹನ್‌ರಾಜ್, ವಿ ರಮೇಶ್‌ಕುಮಾರ್, ಗುರುದತ್ತ (ಗುರುದತ್ತ ಸಾಹುಕಾರ್) ಮುಂತಾದವರು ಪೂರಕರಾಗಿ ಕೆಲಸ ಮಾಡಿದ್ದಾರೆ. ಮುಂದುವರಿದAತೆ ಜೊತೆಗಿದ್ದು ಪ್ರೋತ್ಸಾಹಿಸಿದವರಲ್ಲಿ ಶ್ರೀಯುತರುಗಳಾದ ಎನ್ ವಿಶ್ವರೂಪಾಚಾರ್, ಜಿ ಎನ್ ನರಸಿಂಹಮೂರ್ತಿ ರಾವ್, ದಾದಾಪೀರ್, ಟಿ ಎಲ್ ನಂಜುAಡಯ್ಯ, ಶಿವರಾಮ್, ಶ್ರೀನಾಥ್, ರಾಮ್, ಬಿ ಶಿವಲಿಂಗಪ್ಪ, ಮುಂತಾದವರಿದ್ದಾರೆ. ಅಂತಹ ಎಲ್ಲ ಬಂಧುಗಳನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ.
ಕೃತಿಯು ರೂಪುಗೊಳ್ಳುವಲ್ಲಿ ಅಕ್ಷರಜೋಡಣೆಯನ್ನು ಮಾಡಿಕೊಟ್ಟ ಆರ್.ಕೆ. ಡಿ.ಟಿ.ಪಿ. ಸೆಂಟರ್ ಸಂಸ್ಥೆಗೆ, ಸುಂದರ ಮುಖಪುಟವನ್ನು ರೂಪಿಸಿಕೊಟ್ಟ ಶ್ರೀ ಉಮೇಶ್ ಅವರಿಗೆ ಮತ್ತು ಅಂದವಾಗಿ ಮುದ್ರಿಸಿ ಪ್ರಕಾಶನಗೊಳಿಸಿದ ಮೆ|| ಪ್ರಕೃತಿ ಪ್ರಕಾಶನ ಸಂಸ್ಥೆಗೆ ನನ್ನ ಆದರಪೂರ್ವಕ ಧನ್ಯವಾದಗಳು.
ಇದೀಗ “ನಲ್ಲೆ ನೀನಿಲ್ಲದೆ” ಕೃತಿಯು ನಿಮ್ಮ ಕೈಸೇರಿದೆ. ಇದನ್ನು ಆದರದಿಂದ ಸ್ವೀಕರಿಸಿದ ನಿಮ್ಮೆಲ್ಲರಿಗೂ ನನ್ನ ಪ್ರೀತಿಪೂರ್ವಕ ಪ್ರಣಾಮಗಳು.
ಬೆಂಗಳೂರು -ವಿ ವಿ ಗೋಪಾಲ್